ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದೇಶ – 2015

Kannada ML UPDATE 11 2015 P1 (1)ಒಂದು ಶತಮಾನಕ್ಕಿಂತಲೂ ಹೆಚ್ಚು ಅವಧಿಯ ಮಹಿಳಾ ಸಮೂಹ ಚಳುವಳಿಗಳು ಮತ್ತು ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆಸಿರುವ ಹೋರಾಟಗಳ ಸಂಕೇತವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಮೆರಿಕದ ಮಹಿಳಾ ಕಾರ್ಮಿಕರು ದಿನಕ್ಕೆ ಎಂಟು ಗಂಟೆಯ ಕೆಲಸ ಮತ್ತು ಮತದಾನದ ಹಕ್ಕಿಗಾಗಿ ಆಗ್ರಹಿಸಿ ನಡೆಸಿದ ಚಾರಿತ್ರಿಕ ಮುಷ್ಕರದ ಸ್ಮರಣೆಯಲ್ಲಿ ಸಮಾಜವಾದಿ ಕ್ರಾಂತಿಕಾರಿ ಮಹಿಳೆಯರು ನಡೆಸಿದ ಆಂದೋಲನದ ಸಂಕೇತವಾಗಿಯೇ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದುಡಿಯುವ ಕ್ರಾಂತಿಕಾರಿ ಮಹಿಳೆಯರು ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು, ವಿಶ್ವದ ಮಹಿಳೆಯರನ್ನು ದಾಸ್ಯದ ಸಂಕೋಲೆಯಿಂದ ಮುಕ್ತರನ್ನಾಗಿಸಲು ಹೋರಾಡಿದ್ದರು. ಆದರೆ ಈ ಇತಿಹಾಸವನ್ನು ನಮ್ಮ ರಾಜಕಾರಣಿಗಳು ಮರೆಮಾಚಲೆತ್ನಿಸುತ್ತಾರೆ. ತನ್ಮೂಲಕ ಈ ಚಾರಿತ್ರಿಕ ಆಂದೋಲನದ ಸಮಕಾಲೀನ ಮಹತ್ವವನ್ನು ಅಲ್ಲಗಳೆಯಲೆತ್ನಿಸುತ್ತಾರೆ. ಬಹುತೇಕ ರಾಜಕಾರಣಿಗಳು ಮಹಿಳಾ ದಿನಾಚರಣೆಯನ್ನು ಮಹಿಳೆಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಅವರ ಸಾಧನೆಗಳನ್ನು ಗುರುತಿಸಲು ಆಚರಿಸುತ್ತಾರೆ. ಬಹುಪಾಲು ಉದ್ಯಮಗಳು ಸಹ ಇದೇ ಧೋರಣೆ ಅನುಸರಿಸುತ್ತವೆ. ಈ ಮೆಚ್ಚುಗೆ ಮತ್ತು ಕೃತಜ್ಞತೆಗಳು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಶ್ಲಾಘಿಸುವ ಪರಂಪರೆಯ ದ್ಯೋತಕವಾಗಿದೆ. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇಂತಹ ಪಿತೃಪ್ರಧಾನ ಧೋರಣೆಯನ್ನು ತಿರಸ್ಕರಿಸುತ್ತದೆ.
ಇದೇ ಪಿತೃಪ್ರಧಾನ ಧೋರಣೆಯನ್ನು ಬಿಂಬಿಸುತ್ತಾ ಪ್ರಧಾನಿ ನರೇಂದ್ರ ಮೋದಿ “ತಾವು ಮಹಿಳೆಯರ ಮಹತ್ತರ ಸಾಧನೆಯನ್ನು ಮುತ್ತು ಅಪ್ರತಿಮ ಸ್ಥೈರ್ಯವನ್ನು ಕೊಂಡಾಡುತ್ತೇನೆ” ಎಂದು ಹೇಳುತ್ತಾರೆ. ಈ ಸಂದೇಶದಲ್ಲಿ ಮೋದಿ ಹೆಣ್ಣು ಮಕ್ಕಳನ್ನು ಉಳಿಸಿ ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಎಂದು ಘೋಷಿಸುತ್ತಾರೆ. ಈ ಘೋಷಣೆಯಲ್ಲಿ ಹೆಣ್ಣು ಮಕ್ಕಳನ್ನು “ರಕ್ಷಿಸುವ” ಧೋರಣೆ ವ್ಯಕ್ತವಾಗುತ್ತದೆ. ಒಳ್ಳೆಯ ಹೆಣ್ಣುಮಕ್ಕಳಾದ್ದರಿಂದ ಅವರನ್ನು ರಕ್ಷಿಸಲಾಗುವುದೇ ಹೊರತು ಸಮಾನ ಮಾನವತೆಯ ದೃಷ್ಟಿಯಿಂದಲ್ಲ. ಮಹಿಳೆಯರ ಶಿಕ್ಷಣ ಮತ್ತು ವಿವಾಹವನ್ನು ಸಮೀಕರಿಸುವುದರ ಮೂಲಕ ವರದಕ್ಷಿಣೆಯನ್ನು ಪ್ರೋತ್ಸಾಹಿಸುವ ಧೋರಣೆಯನ್ನು ಸರ್ಕಾರ ಬಿಂಬಿಸುತ್ತದೆ. ಇಂತಹ ಜನಪ್ರಿಯ ಘೋಷಣೆ ನೀಡುವ ಮೋದಿ ಸರ್ಕಾರ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಗೆ ಬಜೆಟ್ನಲ್ಲಿ ಶೇ 51ರಷ್ಟು ಹಣ ಕಡಿತ ಮಾಡುತ್ತದೆ. ಈ ಯೋಜನೆಯಡಿ ಮಕ್ಕಳ ಅಪೌಷ್ಟಿಕತೆ ಮತ್ತು ಹೆಣ್ಣುಮಕ್ಕಳ ವಿರುದ್ಧ ತಾರತಮ್ಯ ಹೋಗಲಾಡಿಸಲು ಅಂಗನವಾಡಿ ಮೂಲಕ ಹಣ ಒದಗಿಸಲಾಗುತ್ತದೆ. ಆದರೆ ಬಜೆಟ್ ವೆಚ್ಚ ಕಡಿತ ಮಾಡುವ ಮೂಲಕ ಮೋದಿ ಹೇಗೆ ಹೆಣ್ಣು ಮಕ್ಕಳನ್ನು ರಕ್ಷಿಸಲು ಸಾಧ್ಯ ? ಮಕ್ಕಳ ಪೌಷ್ಟಿಕತೆ ಮತ್ತು ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ತೀವ್ರ ಹಿನ್ನಡೆ ಅನುಭವಿಸುತ್ತಿರುವುದನ್ನು ನಿಲರ್ಕ್ಷಿಸಲಾಗುವುದಿಲ್ಲ.
ಮೋದಿಯ ಬಿಜೆಪಿ ಪಕ್ಷದ ಕಾರ್ಯಕರ್ತರ ಪ್ರಚೋದನೆಯಿಂದಲೇ ಅತ್ಯಾಚಾರಕ್ಕೊಳಪಟ್ಟ ಮುಝಫರ್ನಗರದ ಅಮಾಯಕ ಮಹಿಳೆಯರ ಬಗ್ಗೆ ಮೋದಿ ದಿವ್ಯ ಮೌನ ವಹಿಸುತ್ತಾರೆ. ಈ ಘಟನೆಯಿಂದ ಮೋದಿಯ ಪಕ್ಷ ಸಂಸತ್ ಚುನಾವಣೆಗಳಲ್ಲಿ ಹೆಚ್ಚಿನ ಲಾಭ ಗಳಿಸಿತ್ತು. ಅತ್ಯಾಚಾರ ಎಸಗಿದ ಆರೋಪಿಗಳು ಕಾನೂನಿನ ರಕ್ಷಣೆಯಲ್ಲಿ ತಲೆ ಎತ್ತಿ ತಿರುಗಾಡುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಹಿಳಾ ದಿನಾಚರಣೆಯ ಸಂದೇಶವೂ ಸಹ ಪಿತೃಪ್ರಧಾನ ಧೋರಣೆಯನ್ನು ಬಿಂಬಿಸುತ್ತದೆ. “ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದಾಗ ನನ್ನ ಪತ್ನಿ ಸಂಸಾರ ನಿರ್ವಹಿಸಿದ್ದಳು ನನ್ನ ತಾಯಿ ನನಗೆ ಬೆಂಬಲಿಸಿದ್ದರು” ಎಂದು ಹೇಳಿರುವ ಕೇಜ್ರಿವಾಲ್ “ಮಹಿಳೆಯರು ಹೇಗೆ ಯಾವುದೇ ಪ್ರತಿರೋಧ ವ್ಯಕ್ತಪಡಿಸದೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾರೆ, ಹೇಗೆ ತಮ್ಮ ಕುಟುಂಬಗಳನ್ನು ನಿರ್ವಹಿಸುತ್ತಾರೆ” ಎಂದು ಶ್ಲಾಘಿಸುವುದೇ ಅಲ್ಲದೆ ಹೊರಗಿನ ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ ಪುರುಷರು ತಮ್ಮ ಕುಟುಂಬದಲ್ಲೂ ಗೌರವಿಸುವುದಿಲ್ಲ ಹಾಗಾಗಿ ರಸ್ತೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡದಿರುವಂತೆ ಆಗ್ರಹಿಸುತ್ತಾರೆ.
ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ರಾಜಕೀಯ ಹೋರಾಟಗಳಲ್ಲಿ ನಿರತರಾಗಿರುವ ಪುರುಷರಿಗಾಗಿ ಮಹಿಳೆಯರು ಕುಟುಂಬ ನಿರ್ವಹಿಸಬೇಕು ಎಂದು ಅಪೇಕ್ಷಿಸಲಾಗುತ್ತದೆ. ಯಾವುದೇ ಪ್ರತಿರೋಧವಿಲ್ಲದೆ ಹೊಣೆಗಾರಿಕೆಯನ್ನು ಹೊತ್ತು ತಮ್ಮ ದುಡಿಮೆಯ ಮೂಲಕ ಕುಟುಂಬವನ್ನು ಸಲಹಬೇಕು ಎಂದು ಅಪೇಕ್ಷಿಸಲಾಗುತ್ತದೆ. ಆದರೆ ಮಹಿಳಾ ಚಳುವಳಿಯ ಇತಿಹಾಸದಲ್ಲಿ ಈ ಶ್ರಮ ವಿಭಜನೆ ಮತ್ತು ಪಾತ್ರ ನಿರ್ವಹಣೆಯ ಧೋರಣೆಯನ್ನು ತಿರಸ್ಕರಿಸಲಾಗುತ್ತದೆ. ಕುಟುಂಬ ನಿರ್ವಹಣೆಯ ಹೊಣೆಗಾರಿಕೆಯನ್ನು ತಮ್ಮ ಮೇಲೆ ಹೊರಿಸುವುದನ್ನು, ಕಾರ್ಯಕ್ಷೇತ್ರದಲ್ಲಿ ಮತ್ತು ಕುಟುಂಬ ಪರಿಸರದಲ್ಲಿ ಶೋಷಣೆಯನ್ನು, ರಾಜಕೀಯ ಆಂದೋಲನಗಳಲ್ಲಿ ತೊಡಗುವ ಪುರುಷರಿಗೆ ನೆರವಾಗಲು ಕುಟುಂಬ ನಿರ್ವಹಿಸುವುದನ್ನು ಮಹಿಳಾ ಚಳುವಳಿ ಇತಿಹಾಸದುದ್ಧಕ್ಕೂ ನಿರಾಕರಿಸುತ್ತಲೇ ಬಂದಿದೆ. ಕೇಜ್ರಿವಾಲ್ ಅವರ ಸಂದೇಶದಲ್ಲಿ ಮಹಿಳೆಯರ ಪ್ರತಿರೋಧದ ದನಿಯನ್ನು ಶ್ಲಾಘಿಸುವುದಕ್ಕಿಂತಲೂ ಹೆಚ್ಚಾಗಿ ಮೌನವಾಗಿ ಜವಾಬ್ದಾರಿಯನ್ನು ಹೊರುವ ಪ್ರವೃತ್ತಿಯನ್ನು ಶ್ಲಾಘಿಸುವ ಪುರುಷ ಪ್ರಧಾನ ಧೋರಣೆ ಎದ್ದು ಕಾಣುತ್ತದೆ.
ಮಹಿಳೆಯರಿಗೆ ತಮ್ಮ ಕುಟುಂಬದಲ್ಲಿ ಗೌರವ ತೋರಿಸುವ ನಿಟ್ಟಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಬಾರದು ಎಂದು ಆಗ್ರಹಿಸುವುದೇಕೆ ? ಅಂದರೆ ಮಹಿಳೆಯರು ತಮ್ಮ ಕುಟುಂಬದಲ್ಲಿ ನಿರ್ವಹಿಸುವ ಪಾತ್ರಕ್ಕೆ ಕೃತಜ್ಞತೆ ಸೂಚಿಸಲು ಮಹಿಳೆಯರನ್ನು ರಕ್ಷಿಸಲು ಪುರುಷ ಸಮಾಜ ಬಯಸುತ್ತದೆಯೇ ? ಮಹಿಳೆಯರಿಂದ ಕೌಟುಂಬಿಕ ಸೇವೆ ಮಾಡಿಸಿಕೊಳ್ಳುವ ಉದ್ದೇಶದಿಂದಲೇ ಪುರುಷರು ಒತ್ತಡ ಹೇರುವುದರ ಮೂಲಕ ಹಿಂಸಾತ್ಮಕ ಧೋರಣೆ ವ್ಯಕ್ತಪಡಿಸುತ್ತಾರೆ ಎನ್ನುವುದು ಹಲವು ಅಧ್ಯಯನಗಳ ಮೂಲಕ ತಿಳಿಯುತ್ತದೆ. 2004-05ರ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯ ಪ್ರಕಾರ ಮಹಿಳೆಯರು ಅನುಮತಿ ಇಲ್ಲದೆ ಹೊರಗೆ ಹೋಗುವುದು ( ಶೇ 39), ಕೌಟುಂಬಿಕ ಕರ್ತವ್ಯದಿಂದ ವಿಮುಖರಾಗುವುದು (ಶೇ35), ಸರಿಯಾಗಿ ಅಡುಗೆ ಮಾಡದಿರುವುದು (ಶೇ 29.5) ಮತ್ತು ವರದಕ್ಷಿಣೆಯ ಸಂಬಂಧಿತ ವಿಚಾರಗಳು (ಶೇ 29) ಅವರ ಮೇಲೆ ಪುರುಷರು ಹಲ್ಲೆ ಮಾಡಲು ಮುಖ್ಯ ಕಾರಣಗಳಾಗಿವೆ. ಬಿಬಿಸಿ ಸಾಕ್ಷ್ಯ ಚಿತ್ರ ಇಂಡಿಯಾಸ್ ಡಾಟರ್ನಲ್ಲೂ ಸಹ ಭಾರತದ ಮಹಿಳೆಯರು ಪೋಷಕರ ಅನುಮತಿ ಪಡೆದೇ ಸ್ನೇಹಿತನೊಂದಿಗೆ ಹೊರಗೆ ಹೋಗುವ ಸನ್ನಡತೆಯ ಪುತ್ರಿಯರ ಚಿತ್ರಣ ಕಾಣುತ್ತದೆ. ಅತ್ಯಾಚಾರಿಯ ಮನೋಭಾವವನ್ನು ಮತ್ತು ಮಹಿಳಾ ವಿರೋಧಿ ಭಾವನೆಯನ್ನು ಅತ್ಯಾಚಾರಿಯಲ್ಲಿ ಮತ್ತು ಅವರನ್ನು ಸಮರ್ಥಿಸುವ ವಕೀಲರಲ್ಲಿ ಗುರುತಿಸುತ್ತದೆ. ಆದರೆ ಈ ವ್ಯವಸ್ಥೆಯ ಸಂರಕ್ಷಕರು, ಪೋಲೀಸ್ ಅಧಿಕಾರಿಗಳು, ರಾಜಕಾರಣಿಗಳು ಮತ್ತು ದೇವಮಾನವರು ಇದೇ ಮನೋಧರ್ಮ ಹೊಂದಿರುವುದನ್ನು ಚಿತ್ರದಲ್ಲಿ ಬಿಂಬಿಸÀಲಾಗಿಲ್ಲ. ಕೆಳಮಟ್ಟದ ಅವಕಾಶವಂಚಿತರನ್ನೇ ಅತ್ಯಾಚಾರಿಗಳಂತೆ ಬಿಂಬಿಸುವ ಚಿತ್ರದಲ್ಲಿ ಅತ್ಯಾಚಾರ ಎನ್ನುವುದು ಇನ್ನೂ ಹೆಚ್ಚಿನ ವ್ಯಾಪ್ತಿ ಹೊಂದಿರುವುದನ್ನು ಅಲಕ್ಷಿಸಲಾಗಿದೆ. ಅತ್ಯಾಚಾರ ಮತ್ತು ಮಹಿಳೆಯ ಭÀದ್ರತೆಯ ವಿಚಾರವನ್ನು ಹೇಗೆ ಪುರುಷಪ್ರಧಾನ ವ್ಯವಸ್ಥೆಯ ಹಿಂಸಾತ್ಮಕ ಧೋರಣೆಯ ಸಂಕೇತವನ್ನಾಗಿ ಮಾಡಲಾಗುತ್ತದೆ, ನ್ಯಾಯಕ್ಕಾಗಿ ಹೋರಾಡುವ ಮಹಿಳೆಯರ ದನಿಯನ್ನು ಹೇಗೆ ನಿಲರ್ಕ್ಷಿಸಲಾಗುತ್ತದೆ ಎನ್ನವುದನ್ನು ದಿಮಾಪುರ ಜೈಲಿನಲ್ಲಿ ನಡೆದ ಉಗ್ರ ಹಿಂಸಾತ್ಮಕ ಪ್ರತಿಭಟನೆ ಬಿಂಬಿಸುತ್ತದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬಾಂಗ್ಲಾದೇಶದಿಂದ ವಲಸೆ ಬಂದವನೆಂದು ಬಿಂಬಿಸÀಲಾಗಿದೆ. ಆದರೆ ಆರೋಪಿ ಅಸ್ಸಾಂನ ಪ್ರಜೆ ಎನ್ನುವುದನ್ನು ಮರೆಮಾಚಲಾಗಿದೆ. ಆರೋಪಿ ಹೊರಗಿನವನೇ ಆದರೂ ಈ ರೀತಿ ಹಲ್ಲೆ ಮಾಡುವುದು ಪಿತೃಪ್ರಧಾನ ವ್ಯವಸ್ಥೆಯ ಸಂಕೇತವಾಗಿಯೇ ಕಾಣುತ್ತದೆ. ಅಕ್ರಮ ಬಾಂಗ್ಲಾ ವಲಸೆಗಾರರನ್ನು ಕೋಮುದ್ವೇಷದ ವೇದಿಕೆಯಾಗಿ ಬಳಸಿಕೊಳ್ಳುವುದನ್ನು ಇಲ್ಲಿ ಕಾಣಬಹುದು.
ದೀಮಾಪುರ ಘಟನೆ ಹುಟ್ಟುಹಾಕುವ ಮತ್ತೊಂದು ಪ್ರಶ್ನೆ ಎಂದರೆ ಅದೇ ಸಮುದಾಯದ ಅತ್ಯಾಚಾರಿಗಳ ವಿರುದ್ಧ ಏಕೆ ಪ್ರತಿಭಟನೆ ವ್ಯಕ್ತವಾಗುವುದಿಲ್ಲ ? ಅನ್ಯ ಸಮುದಾಯದ ವ್ಯಕ್ತಿ ಆತ್ಯಾಚಾರ ಎಸಗಿದಾಗ ಮಾತ್ರ ಇಂತಹ ಹಿಂಸಾತ್ಮಕ ಪ್ರತಿರೋಧ ವ್ಯಕ್ತವಾಗುವುದೇಕೆ ? ಅತ್ಯಾಚಾರವನ್ನು ಸಮುದಾಯದ ಗೌರವದ ಪ್ರಶ್ನೆಯನ್ನಾಗಿ ನೋಡಲಾಗುವುದೇ ಹೊರತು, ಮಹಿಳೆಯ ಗೌರವದ ಪ್ರಶ್ನೆಯಾಗಿ ನೋಡಲಾಗುವುದಿಲ್ಲ ಏಕೆ ? ಮಹಿಳೆಯರನ್ನು ಸಮುದಾಯದ ಗೌರವದ ಸಂಕೇತವನ್ನಾಗಿ ನೋಡಲಾಗುವುದೇ ಹೊರತು ವ್ಯಕ್ತಿಗತ ನೆಲೆಯಲ್ಲಿ ನೋಡಲಾಗುವುದಿಲ್ಲ. ಖಾಪ್ ಪಂಚಾಯತ್ಗಳು ಅನ್ಯ ಜಾತಿಯಲ್ಲಿ ವಿವಾಹವಾದ ಮಹಿಳೆಯರ ಮರ್ಯಾದೆ ಹÀತ್ಯೆ ಮಾಡುವುದನ್ನೂ ಈ ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. ದಿಮಾಪುರ ಘಟನೆಯಲ್ಲಿ, ಮುಝಫರ್ನಗರದಲ್ಲಿ ಬಿಜೆಪಿ ಕಾರ್ಯಕರ್ತರ ವರ್ತನೆಯಲ್ಲಿ , ದೆಹಲಿಯ ರಾಜೀವ್ ಚೌಕ್ನ ಆಫ್ರಿಕಾದ ಪುರುಷರ ಮೇಲಿನ ಹಲ್ಲೆಯ ಪ್ರಕರಣದಲ್ಲಿ ಪಿತೃಪ್ರಧಾನ ಧೋರಣೆ ಎದ್ದು ಕಾಣುತ್ತದೆ. ಖಿರ್ಕಿ ಪ್ರಕರಣದಲ್ಲಿ ಆಮ್ ಆದ್ಮಿ ಪÀಕ್ಷದ ಸಚಿವರು ಆಫ್ರಿಕಾದ ಮಹಿಳೆಯರನ್ನೇ ದೋಷಿಗಳಂತೆ ಬಿಂಬಿಸುವುದನ್ನೂ ಗಮನಿಸಬೇಕು.
ಮಹಿಳೆಯರ ರಕ್ಷಣೆ ಸೇಡಿನ ಕ್ರಮಗಳಿಂದ ಸಾಧ್ಯವಾಗುವುದಿಲ್ಲ. ಬದಲಾಗಿ ಎಲ್ಲ ಮಹಿಳೆಯರನ್ನೂ ಸಮಾನವಾಗಿ ಗೌರವಿಸುವುದರ ಮೂಲಕ ಸಾಧ್ಯವಾಗುತ್ತದೆ. ಪಿತೃಪ್ರಧಾನ ಸಂರಚನೆಗಳಾದ ವರ್ಗ, ಜಾತಿ, ಲಿಂಗ, ಜನಾಂಗೀಯ ಧೋರಣೆಯನ್ನು ರೋಧಿಸಬೇಕಿದೆ. ಇದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದೇಶವಾಗಬೇಕಿದೆ.

Back-to-previous-article
Top