ಪಾಕಿಸ್ತಾನದ ಪೇಶಾವರದಲ್ಲಿ ಸೈನಿಕ ಶಾಲೆಯಲ್ಲಿ ಮುಗ್ದ ಮಕ್ಕಳನ್ನು ತಾಲಿಬಾನಿಗಳು ಹತ್ಯೆಗೈದಿರುವುದು ಅಮಾನವೀಯ ಕೃತ್ಯವಾಗಿದೆ ಎಂದು ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೇಕಲ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ವಿಶ್ವದಲ್ಲಿಯೇ ಅತ್ಯಂತ ಹೀನವಾದ ಮಕ್ಕಳ ಹತ್ಯಾಕಾಂಡದಿಂದ ಇಸ್ಲಾಂ ಮೂಲಭೂತವಾದಿಗಳು ಯಾವುದೇ ಧರ್ಮಕ್ಕೆ ಕಟ್ಟುಬಿದ್ದಿಲ್ಲವೆಂದು ಜಗಜ್ಜಾಹೀರಾಗಿದೆ. ತೈಲ ಸಂಪನ್ಮೂಲ ಲೂಟಿಗಾಗಿ ಅಮೆರಿಕಾ ಮಾಡಿದ ರಾಜಕೀಯ ಕುತಂತ್ರದಿಂದ ಕಳೆದ 40 ವರ್ಷಗಳಿಂದ ತಾಲಿಬಾನಿ ಗುಂಪುಗಳು ಬಲಗೊಂಡು ಭಯೋತ್ಪಾದನೆ ಚಟುವಟಿಕೆಗಳಿಂದ ವಿಶ್ವಕ್ಕೆ ಕಂಟಕವಾಗಿದ್ದಾರೆ.
ಇರಾನ್, ಇರಾಕ್, ಲಿಬಿಯಾ, ಅಫಘಾನಿಸ್ಥಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಇರುವ ಸರಕಾರಗಳಿಗೆ ತಾಲಿಬಾನ್ಗಳಿಂದ ಗಂಡಾಂತರವಿದೆ. ಇಸ್ಲಾಮಿನ ಪ್ರಗತಿಪರರು, ಬುದ್ಧಿಜೀವಿಗಳು ತಾಲಿಬಾನಿಗಳ ಭಯೋತ್ಪಾದನೆ ವಿರುದ್ಧ ಜನಜಾಗೃತಿಗೊಳಿಸಿ ಇಸ್ಲಾಂ ಧರ್ಮದಿಂದ ಭಯೋತ್ಪಾದನೆಯನ್ನು ಬೇರ್ಪಡಿಸುವ ಕೆಲಸ ಆಗಬೇಕಾಗಿದೆ.
ಅಮೇರಿಕಾ ಮತ್ತು ಭಾರತ ಪೇಶಾವರ ಮಕ್ಕಳ ಹತ್ಯಾಕಾಂಡವನ್ನು ರಾಜಕೀಯಕ್ಕೆ ಬಳಸಿಕೊಳ್ಳದೇ ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಗಳನ್ನು ಮಾಡಿ ಭಯೋತ್ಪಾದಕರನ್ನು ಮಟ್ಟಹಾಕಿ, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಸಿಪಿಐಎಂಎಲ್ ಒತ್ತಾಯಿಸಿದೆ.